ಕುಂಟು ಮಿಡತೆಗಳು

 ಡಿಕ್ಟಿಯಾಪ್ಪಿರ ಗಣದ ಮ್ಯಾಂಟಾಯ್ಡಿಯ ಗುಂಪಿಗೆ ಸೇರಿದ ಕೀಟಗಳು. ಇವುಗಳ ವದನಾಂಗಗಳು ಆಹಾರವನ್ನು ಕತ್ತರಿಸುವುದಕ್ಕೆ ಅನುಕೂಲವಾಗಿವೆ. ಕುಂಟುಮಿಡತೆಗಳ ಕುಡಿಮೀಸೆಗಳು ಬಲು ಉದ್ದ; ಹಿಂದಿನ ಕಾಲುಗಳು ಉದ್ದ ಮತ್ತು ದಪ್ಪವಾಗಿವೆ; ನೆಗೆಯುವುದಕ್ಕೆ ಅನುಕೂಲಿಸುವಂತೆ ಕಾಲಿನ ಕೊನೆಯ ಭಾಗ ಮೂರು ತುಂಡುಗಳನ್ನೊಳಗೊಂಡಿದೆ. ಮುಂದಿನ ರೆಕ್ಕೆಗಳು ದಪ್ಪವಾಗಿವೆ. ವಿಶೇಷ ತರದ ಧ್ವನಿ ಉತ್ಪಾದಕ ಮತ್ತು ಧ್ವನಿ ಗ್ರಾಹಕ ಅಂಗಗಳೇ ಕುಂಟುಮಿಡಿತೆಗಳ ವೈಶಿಷ್ಟ್ಯ. ಧ್ವನಿಗ್ರಾಹಕ ಆಂಗಗಳು ಮುಂಗಾಲುಗಳ ಮೇಲೆ ಇವೆ. ಕುಂಟುಮಿಡಿತೆಗಳು ತಾವು ಮಾಡುವ ಜಿರ್ರೆಂಬ ಶಬ್ದಕ್ಕೆ ಹೆಸರಾಗಿವೆ. ಧ್ವನಿ ಉತ್ಪಾದಕ ಆಂಗಗಳೇ ಈ ಶಬ್ದಕ್ಕೆ ಕಾರಣ. ಮುಂದಿನ ಎರಡು ರೆಕ್ಕೆಗಳ ಮೇಲೆ ಇರುವ ಅರದಂಥ ಅಂಗಕ್ಕೆ ರೆಕ್ಕೆಗಳನ್ನು ಉಜ್ಜುವುದರಿಂದ ಈ ತರಹ ಶಬ್ದ ಉಂಟಾಗುತ್ತದೆ. ಕೆಲವು ಕುಂಟುಮಿಡತೆಗಳು (ಉದಾ: ಬ್ರಾಕಿಟ್ರೈಪಿಸ್ ಮೆಗಸಿಫಾಲಸ್) ಮಾಡುವ ಶಬ್ದ ಸುಮಾರು ಒಂದು ಮೈಲಿಯವರೆಗೂ ಕೇಳಿಬರುವುದುಂಟು. 

(ಜಿ.ಪಿ.ಸಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ